ಶ್ರೀ ದಾಸಪ್ಪ ದಾಸರ ರಚನೆ
ಗುರು ಗೋಪಾಲ ವಿಠ್ಠಲ ಅಂಕಿತ 🙏
ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ || ಪ ||
ಹಲವಂಗದವನ ಹವಣೆ ತಿಳಿದೂ ತಿಳಿದು ತಿಳಿಯದ್ಹಾಂಗೆ || ಅ ಪ ||
ಕಮಲಗಂಧಿ ಕೋಮಲಾಂಗಿ| ಸುಂದರಾಬ್ಜ ವದನೆ ನೀನು|
ರಮಣ ಮತ್ಸ್ಯ ಕಠಿಣಕಾಯ| ಸೂಕರಾಸ್ಯನು|
ರಮಣೀಯ ಸ್ವರೂಪಿ ನೀನು ಅಮಿತ ಘೋರ ರೂಪನವನು|
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ || 1 ||
ಜಾಣೆ ರತ್ನಾಕರನ ಮಗಳು| ನೀನು ಶುದ್ಧ ಭೃಗುಜನವನು|
ಆನಂದಾಬ್ಜ ಸದನೆ ನೀನು ವನವಾಸಿ ಅವನು|
ಮಾನೆ ಪತಿವ್ರತೆಯು ನೀನು ನಾನಾಯೋಷಿತ್ಕಾಮಿ ಅವನು|
ಜ್ಞಾನ ಚಿತ್ರವಸನೆ ನೀನು|
ಹೀನ ಚೈಲದವನಿಗೆ || 2 ||
ಲಲಿತೆ ಚಾರುಶೀಲೆ ನೀನು ಕಲಕಿ ಕಲಹ ಪ್ರಿಯನು ಅವನು|
ಕುಲದ ಕುರುಹು ಇಲ್ಲ ಇನ್ನು ನೆಲೆಯು ಗಂಡಿಲ್ಲ|
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು|
ಜಲದಿ ಆಲದೆಲೆಯ ಮೇಲೆ ಮಲಗಿ ಬೆರಳ ಸವಿವವನಿಗೆ || 3 ||
ಅವನ ವಾರ್ತೆ ಕೇಳಿದವರು ಒಲ್ಲರೊ ಸಂಸಾರವನ್ನು|
ಅವನ ಮೂರ್ತಿ ನೋಡಿ ಮನೆಯ ಧನವ ಬಿಡುವರೋ|
ಅವನ ಪುರಕೆ ಪೋದ ಜನರು ಒಮ್ಮಿಗನ್ನು ಹಿಂತಿರುಗರು|
ಅವನು ತಾನೆ ತನಯರ ತನ್ನವಯವದಿಂದ ಪಡೆದವಗೆ || 4 ||
ಸ್ವರತ ಅನಪೇಕ್ಷ ಕಾಮಿ| ನಿದ್ರಾಹೀನ ಅನಶ ನೀನು|
ಸ್ಪರುಷರೂಪ ಶಬ್ದವಾಚ್ಯ ಅಮಿತ ಭೋಕ್ತನು|
ಗುರು ಗೋಪಾಲ ವಿಠಲನು ನಿರುತ ತನ್ನ ವಕ್ಷದೊಳು|
ಅರಮನೆಯ ಮಾಡಿಟ್ಟು ಮರುಳು ಮಾಡಿದ ಮಾಯಾವಿಗೆ || 5 ||
Негізгі бет olide yatakamma lakumi vasudevage/ ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ / gurugopala vittala ankita
Пікірлер: 69