ಅಯೋಧ್ಯೆಯಲ್ಲಿ ಪ್ರತಿಷ್ಠಾಪಿತನಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇವರಿಗೆ ಭಕ್ತಿಯಿಂದ ಸಮರ್ಪಣೆ.
ಶ್ರೀರಾಮ ಗುಣನಿಸ್ಸೀಮ ಸಾರ್ವಭೌಮನ ಚರಿತ್ರೆಯ ಹಾಡು
ರಚನೆ.... ವ್ಯಾಸತೀರ್ಥಾಚಾರ್ಯ...(ಶ್ರೀಕಾಂತ ಕನವಳ್ಳಿ)
ಅಂಕಿತ... ಮೂಲರಾಮ
ಶ್ರೀ ಗುರುಭ್ಯೋ ನಮಃ ಹರಿಃ ಓಂ
ನೆನೆವೆನನುದಿನ ನೀಲನೀರದವರ್ಣನ ಗುಣರನ್ನನ l
ಇನಕುಲೋದ್ಭವ ಸಾರ್ವಭೌಮ ಶ್ರೀರಾಮನ ಗುಣದಾಮನl
ll
1
ದಶರಥನ ಸುತನಾಗಿ ಧರೆಯೊಳು ಬಂದನ, ಸುರವಂದ್ಯನl
ವಿಶ್ವಾಮಿತ್ರರ ಯಾಗರಕ್ಷಕನಾದನ, ಮುನಿವಂದ್ಯನ l
ಅಸುರೆತಾಟಕೆ ಸುಬಾಹುದೈತ್ಯನ ಕೊಂದನ, ಚಿದಾನಂದನl
ವಸುಧೆಯೊಳು ಕಲ್ಲಾದಹಲ್ಯೆಯ ಪೊರೆದನ, ಕರಿವರದನ ll
2
ಹರನ ಧನುವನುಮುರಿದು ಸೀತೆಯಪಡೆದನ, ಕರಪಿಡಿದನl
ಹರಿಯಧನುವನು ಸೆಳೆದು ಅತುಲನಕೊಂದನ,ಆನಂದನ.l
ಹರುಷದಿಂದಲಯೋಧ್ಯಪುರದೊಳುಬಂದನ,ಅಲ್ಲನಿಂದನl
ಹರುಷಪಡಿಸುತ ಸಕಲಪ್ರಜೆಗಳ ಪ್ರೀಯನ, ಕವಿಗೇಯನll
3
ಕೈಕೇಯಿಯ ವಚನವನು ನಡೆಸಲು ಕಾನನವನು ಪೊಕ್ಕನ l
ಕಾಕು ಕುರಂಗಾಸುರನ ಕಣ್ಣನು ಕಿತ್ತನ, ಅತಿಶಕ್ತನ l
ಭಕುತ ಶರಭಂಗನಿಗೆ ಮುಕುತಿಯ ಕೊಟ್ಟನ, ಸಂತುಷ್ಟನ l
ತೆಕ್ಕೆಯಲಿ ಹಿಡಿದೆಳೆದ ವಿರಾಧನ ಮುಕ್ತ ಗೊಳಿಸಿದ ಶಕ್ತನ ll
4
ಶೂರ್ಪಣಖೆಯ ನಾಸಿಕವ ಖಡ್ಗದಿ ಕಡಿದನ, ಸದೆಬಡಿದನ l
ಖರ ತ್ರಿಶಿರ ದೂಷಣರನೆಲ್ಲರ ಸೀಳ್ದನ, ಸುರರಾಳ್ದನ l
ಹರಿಣರೂಪದ ಅರಿ ಮಾರೀಚ ವಿಘಾತನ, ವಿಖ್ಯಾತನ l
ವೈರಿ ರಾವಣನೊಯ್ದ ಸೀತೆಯ ನೆನೆದನ, ವನ ಅಲೆದನ ll
5
ಸೀತೆಯನು ರಕ್ಷಿಸಿದ ಪಕ್ಷಿಗೆ ಮೋಕ್ಷವನು ಕರುಣಿಸಿದನ l
ಧೂರ್ತ ಕಬಂಧಾಸುರನ ತೊಳ್ಗಳ ಕಡಿದನ, ಕಡುವೀರನ l
ಭಕ್ತೆ ಶಬರಿಯ ಫಲವನುಂಡ ಸಮರ್ಥನ, ಜಗತ್ಕರ್ತನ l
ಭೃತ್ಯಹನುಮನ ಕಂಡುಮೆಚ್ಚುತ ನಲಿದನ, ಅವಗೊಲಿದನll
6
ಕಾಲಬೆರಳಲಿ ದುಂದುಭಿಯನು ಎಸೆದನ, ಯಶ ಪಡೆದನl
ತಾಲ ಮರಗಳ ಕಡಿದು ದೈತ್ಯರ ಹೊಡೆದನ, ಹುಡಿಗೆಡೆದನl
ವಾಲಿಯನು ಕೊಲ್ಲುತ ಸುಗ್ರೀವಗೆ ರಾಜ ಪಟ್ಟವ ಕೊಟ್ಟನ l
ಲಲನೆ ಸೀತೆಯ ಕಾಣಲೋಸುಗ ಕಪಿಗಳನು ಕೂಡಿಸಿದನll
7
ಅಂಗನೆಯ ಅರಸವುದಕೆಲ್ಲೆಡೆ ಕಪಿಗಳನು ಕಳುಹಿಸಿದನ l
ಉಂಗುರವನು ನೀಡಿ ಹನುಮನ ದಕ್ಷಿಣಕೆ ಪೋಗೆಂದನ l
ಲಂಘಿಸುತ ಶರಧಿಯನು ಸೀತೆಯ ಕಂಡ ಹನುಮನ, ಒಡೆಯನl
ಬಂಧಿಸುತ ಶರಧಿಯನು ಸೇತುವೆ ಬಂಧಿಸಿದ ಗಂಭೀರನ ll
8
ವೀರವಾನರ ಸೈನ್ಯಸಹಿತದಿ ಲಂಕೆಯನು ತಾ ಪೊಕ್ಕನl
ಘೋರಯುದ್ಧವ ಮಾಡಿ ಅಸುರರ ಗೆದ್ದನ,ಅನವದ್ಯನl
ಧುರದೊಳಗೆ ಲಕ್ಷ್ಮಣನು ಬೀಳಲು ಪೊರೆದನ, ನೆರೆ ಮೆರೆದನl
ವೈರಿ ರಾವಣಕುಂಭಕರ್ಣ ಸಂಹಾರನ, ಬಹುಶೂರನ ll
9
ಶುದ್ಧನಾದ ವಿಭೀಷಣಗೆ ತಾ ಪಟ್ಟಗಟ್ಟಿದ, ಶ್ರೇಷ್ಟನ l
ಶುದ್ಧಳಾಗಿಹ ಸೀತೆಯೊಡನೆ ಅಯೋಧ್ಯಪುರದಲಿ ನಲಿದನl
ಸಿದ್ಧನಾಗಿಹ ಭರತನಿಗೆ ಪ್ರೀತಿ ಪಾತ್ರನ, ಶುಭಗಾತ್ರನl
ಯುದ್ಧವಿಲ್ಲದಯೋಧ್ಯಪುರವನು ಆಳ್ದನ, ನೆರೆ ಬಾಳ್ದನ ll
10
ಇಂತುಇಳೆಯ ಸುಜನರನೆಲ್ಲರ ಮುಕ್ತಿ ಮಂಟಪಕೊಯ್ದನl
ಪಂಥವುಳ್ಳ ಪ್ರಸನ್ನಮೂರುತಿ ರಾಮನ, ಗುಣಧಾಮನ l
ಸಂತಸದೊಳೀ ಸಾರ ಕಥೆಯನು ಕೇಳ್ವರ, ನೆರೆಬಾಳ್ವರl
ಕಂತುಪಿತ ಶ್ರೀ ಮೂಲರಾಮನು ಪೊರೆವನು ಸುಖಗರೆವನು ll....
*****************************************
#short_ramayana
#song_ramayana
#ramayan
#devotional
#ram
#ramlala
#ayodhya
#ayodhyarammandir
#ayodhyadham
#ayodhyarama
#kannada_ramayana
#vyasateerthacharya
#valmiki
#valmikiramyan
#madhwacharya
#tatparya_nirnaya
#ballad
Негізгі бет Sankshipta Ramayana|ಸಂಕ್ಷಿಪ್ತ ರಾಮಾಯಣ|ವ್ಯಾಸತೀರ್ಥಾಚಾರ್ಯ
Пікірлер: 21